Wednesday, July 13, 2016

ನೆನಪ ಪೊಟ್ಟಣ

ಮಡಚಿ ಅಡಗಿಸಿಟ್ಟ ನೆನಪ ಪೊಟ್ಟಣವೊಂದು ತಡರಾತ್ರಿ ನೆನಪಾಗಿ ಕಾಡಿದೆ.
ಕನಸಿಗೆ ಗೆದ್ದಲು ಹಿಡಿದು,
ಹುರುಪಿಗೆ ಮುಪ್ಪದು ಬಡಿದು,
ಆಸೆಗಳ ಅವಸಾನದ ದಿನಗಳಲೂ ,
ಮನಸಿದು ನೆನಪ ಪೊಟ್ಟಣವ ಹುಡುಕಲಣಿಯಾಗಿದೆ.

Nikkii..!!!

Saturday, July 9, 2016

ಬರದೇ ಇರಬೇಡ

ಜನುಮದಿನಕ್ಕೊಂದು ಶುಭಾಷಯ ಹೇಳೋಕಾದ್ರೂ ಕಾಲ್ ಮಾಡ್ತಿಯ ಅಂದ್ಕೊಂಡಿದ್ದೆ. ಆ ಆಸೆನೂ ಈಡೇರ್ಲಿಲ್ಲ. ನಮ್ಮೂರ ಜಾತ್ರೆಲಿ ಮಿಠಾಯಿ ಬೆಂಡು ಬತ್ತಾಸು ಕೊಡಿಸ್ಬೆಕು ಅಂದ್ಕೊಂಡಿದಿನಿ ಬರದೇ ಇರ್ಬೇಡ. ನೀನು ನಿನ್ನ ಮುಂಗುರುಳ ಜೊತೆ ನಿಮಿಶಕ್ಕೆ ಆರು ಬಾರಿ ಕೈ ಮಿಲಾಯ್ಸೊದನ್ನ ದೂರದಿಂದಾನೆ ಕಂಡು ಖುಶಿಪಟ್ಕೋತಿನಿ. 
ಒಂದೆರಡು ಹುಚ್ಚು ಕನಸಿದೆ ಕಣೆ, ನಿನ್ನ್ ಕಿವಿಓಲೆ ಹಿಡ್ಕೊಂಡು ಜೋಕಾಲಿ ಆಡ್ಬೆಕು, ನಿನ್ನ ಗುಳಿ ಕೆನ್ನೆಯೊಳಗೆ ಸ್ವಲ್ಪ ಜಾಗನ ಲೀಸ್ ಗೆ ತಗೊಂಡು ಬೆಚ್ಚಗೆ ಮಜವಾಗಿ ಮಲ್ಕೊಬೇಕು ಅಂತೆಲ್ಲ. ಸ್ವಲ್ಪ ಜಾಸ್ತಿನೆ ತಿಕ್ಲು ಅಲ್ವಾ ನಾನು. ನಿನ್ನ ಹಣೆಯ ಮೇಲೆ ಕೆಂಪು ಕುಂಕುಮವಾಗಿದ್ದು ನೂರುಕಾಲಸುಮಂಗಲಿಯಾಗಿಡೋ ಅದೃಷ್ಟ ನಂಗಿದ್ಯೋ ಇಲ್ವೋ ಗೊತ್ತಿಲ್ಲ. ಬಟ್ ಕೈಲಿ ತಿಳಿನೀಲಿ ಬಣ್ಣದ friendship band ಆಗಾದ್ರೂ ಇರ್ತಿನಿ, ನಿನ್ನ ಜೋಪಾನ ಮಾಡ್ತಿನಿ. ಆಮೆಲೆ ಮುಂದಾಗೊದ್ನ ನೋಡ್ಕೊಂಡ್ರಾಯ್ತು ಅಲ್ವಾ.

ಸಂಜೆಯ ರಂಗಿನ ಮಜ ಹೆಚ್ಚಾಗ್ತಿದೆ. ತೇರು ಎಳ್ಯೋಕೆ ಇನ್ನೇನು ಕೆಲವೇ ಹೊತ್ತು ಬಾಕಿ. ಈ ಜನಜಂಗುಳಿಯ ಮಧ್ಯೆ ನಿನ್ ಕಾಲಿನ ಗೆಜ್ಜೆ ಸದ್ದಂತೂ ನಂಗೆ ಕೇಳ್ಸಲ್ಲ. ಎದುರಿಗೆ ಬಂದು ನಿನ್ನ ಮುಂಗುರುಳ ಎಂದಿನಂತೆ ಹಿಂದೆ ತಿರುಗಿಸಿ ನಾ ಕೊಡಿಸಿದ ಜುಮುಕಿ ಜೊತೆ ನಿನ್ನ ಗುಳಿಕೆನ್ನೆನ ತುಸು ತೋರಿಸ್ಬಿಟ್ಟು ಹೋಗ್ಬಿಡೆ. ಬಳೆಪೇಟೆ ಸುತ್ತೋಣ , ಗಿರ ಗಿರ ಬಂಡಿಲಿ ಜೊತೆ ಜೊತೆಯಾಗಿ ಕೂತ್ಕೊಳೋಣ, ಬೋಂಬೆಮಿಠಾಯಿ ಬೈಟೂ ತಿನ್ನೋಣ, ಕಿರುಬೆರಳಿಗೆ ಬೆರಳತಾಗಿಸಿ ಜಗತ್ತಿನ ಪರಿವೇಇಲ್ಲದೆ ತಿರುಗೋಣ, ಇದ್ಯಾವ್ದನ್ನೂ ಕೇಳಲ್ಲ. ನಂಬು ನನ್ನ.
ಬರದೇ ಇರಬೇಡ ಅಷ್ಟೆ.
ನಿkkii

Love you ಕಣೋ ಗೆಳೆಯ

ಹೂ ಕಣೋ ನೀನಂದ್ರೆ ನಂಗಿಷ್ಟ!!
ಒಂದು ಸಲ ಅಲ್ಲ ಸಾವಿರ ಸಲ ನಿನ್ನ ಹೆಸರನ್ನ ಕೂಗ್ತಾ ಇರ್ತೀನಿ, ಏನೋ ಇವಾಗ? ನಾನು ಅಂದ್ರೆ ನಿಂಗೆ ಎಷ್ಟು ಇಷ್ಟಾ ಅಂತ ಪದೇ ಪದೇ ಕೇಳ್ತಾನೆ ಇರ್ತೀನಿ ನಿಂಗೇನಾದ್ರೂ ತೊಂದ್ರೇನಾ ಉತ್ತರ ಕೊಡೋಕೆ?
ಬರಗಾಲದಲ್ಲಿ ಸುರಿದ ತುಂತುರು ಮಳೆಹನಿಯಂತೆ ನೀ ನನಗೆ ಸಿಕ್ಕಿದ್ದು ನೆನಪಿದೆಯೇನೋ? ಅದೇನೋ ಭಯಂಕರ ವಾಗಿ ಸದ್ದುಮಾಡ್ತಿದ್ದೆ ಮೊದಮೊದಲೆಲ್ಲ , ಎಷ್ಟು ಅಹಂಕಾರವಿತ್ತು ನಿನಗೆ, ನನ್ನ ಮೂದಲಿಸಿ ಹಿಂಸಿಸಿ ಹಂಗಿಸಿ ಮತಾಡಿಸ್ತಿದ್ದೆ. ವಂಡರ್ ಗಪ್ಪೆ ಅಂತೆಲ್ಲ ಕರೀತಿದ್ಯಲ್ಲೋ ಬಿಳಿ ಜಿರಳೆ.. ಅದ್ಯಾವಾಗ ನಿನ್ನ ಪ್ರೇಮ ಪಾಶದಲ್ಲಿ ಸಿಲುಕಿದ್ನೋ ನಾ ಕಾಣೆ. ಎಂದೂ ದೇವರಿಗೆ ಕೈ ಮುಗಿಯದವಳು ಅವತ್ತು ಶರಣಾಗಿದ್ದೆ. ತುಪ್ಪದ ದೀಪದ ಪುಣ್ಯ ಅವತ್ತು ದೇವರ ಪಾಲಿಗಿತ್ತು. ನಾ ಹಸನಾಗಿದ್ದೆ ಹಾಡಿ ಕುಣಿದಿದ್ದೆ. ಬಹುಶಃ ನನ್ನ ಖುಷಿಯ ಚೀರಾಟ ದೆವರಿಗೂ ತಲುಪಿದ್ದಿರಬೇಕು, ಮಳೆರಾಯ ಧೋ ಅಂತ ಸುರಿದಿದ್ದ ಭೂರಮೆಯ ಜೊತೆ ನಾನೂ ತೊಯ್ದು ತೊಪ್ಪೆಯಾಗಿದ್ದೆ. ಪ್ರಥಮಬಾರಿಗೆ ಪುಳಕಗೊಂಡಿದ್ದೆ. ಅವತ್ತೇ ಕಣೋ ನಾನು ತೀರಾ ದೊಡ್ಡವಳಾಗಿಬಿಟ್ಟಿದೀನಿ ಅನ್ಸಿದ್ದು. ಎಲ್ಲ ನಿನ್ನಿಂದಾನೆ ಕಣೋ ಪಾಪಿ.
ಪಾಪದ ಈ ಹುಡುಗೀನ ಬುಟ್ಟಿಗೆ ಹಾಕ್ಕೊಂಡು ಹೆಂಗೆ ಮೆರಿತಿದಿಯ ನೋಡು. ಕೈಗೆ ಸಿಗು, ಮೈ ಕೈ ಪರಚಿ ಹಾಕದಿದ್ರೆ ನಾನು ಪೂರ್ವಿಯೇ ಅಲ್ಲ. ನನ್ನ ಹೆಸರನ್ನ ನಿನಗಿಷ್ಟದ ಹಾಗೆ ಸುಬ್ಬುಲಕ್ಷ್ಮಿ ಅಂತ ಬದಲಾಯಿಸಿಕೊಳ್ಳೊದು ನಿಶ್ಚಿತ ನೋಡು.
ಲೋ ಗೆಳೆಯ. ನೀನಂದ್ರೆ ನಂಗಿಷ್ಟ ಕಣೋ. ನೀನೇ ನನ್ನ ಪರಪಂಚ ಕಣೋ. ಸಾವಿರ ಕೋಟಿ ವರುಶಗಳನೂ ಕೂಡ ನಿನ್ನ ಜೊತೆಗೆ ಕಳೆಯುವ ಆಣೆ ಅದ್ಯಾವಾಗ್ಲೋ ಮಾಡಾಗಿದೆ ಗೊತ್ತಾ?. ಮಳೆಗಾಲದಲ್ಲಿ ನಿನ್ನ ಗುಬ್ಬಿಯಂತೆ ತಬ್ಬಿ ಓಡಾಡಿದ ದಿನಗಳ ಅದ್ಹೇಗೋ ಮರೀಲಿ?
ನಿನ್ನ ಕರ್ಕಶ ಕಂಠದ ಸುಂದರ ಹಾಡುಗಳನ್ನ ಕೊಲೆ ಮಾಡಬೇಕೆನಿಸುತ್ತಿದ್ದಿದ್ದೂ ನಿಜ ಪುಣ್ಯಾತ್ಮ. ನಿನ್ನ ಆಲಿಂಗನದಲ್ಲಿ ಅದೂ ಜೋಗುಳವೇ.
ಅಪ್ಪ ಅಮ್ಮ ಹತ್ತಿರ ಇಲ್ಲವೆಂಬ ಕೊರಗು ನೀಗಿಸಿದವ ನೀನೇ ಅಲ್ಲವೆನೋ? ನಿನ್ನ ತೊಡೆಯ ಮೇಲೆ ಮಲಗಿ ಅದೆಷ್ಟು ಪುಸ್ತಕಗಳ ಓದಿಲ್ಲ ಹೇಳು. ಅದೆಷ್ಟು ಸಾವಿರ ಸುಂದರ ಸ್ವಪ್ನಗಳ ಕಂಡಿಲ್ಲ ಹೇಳು. ನಿನಗೆ ತಿಳಿಯದ್ದು ಏನಾದರೂ ಇದೆಯಾ ಅನ್ನುವ ಪ್ರಶ್ನೆ ನನಗೆ ಇನ್ನೂ ಇದೆ. ನನಗೆ ಧೋ ಅಂತ ಸುರಿಯುವ ಮಳೆಯ ನಡುವೆ ತಣ್ಣನೆ ಐಸ್ಕ್ಯಾಂಡೀ ಸವಿಯುವುದು ಇಷ್ಟ ಅಂತ ನಿಂಗ್ಯಾರೋ ಹೇಳಿದ್ದು? ನನಗೆ ಹಸಿರು ಬಣ್ಣವಿಷ್ಟ, ಉಟಕ್ಕೆ ಅಪ್ಪೆ ಮಿಡಿ ಉಪ್ಪಿನಕಾಯಿ ಇಷ್ಟ, ತಿಳಿಗುಲಾಬಿ ಬಣ್ನದ ಕೊಡೆ ಇಷ್ಟ, ಶಿವಮೊಗ್ಗೆಯ ಆಸುಪಾಸಿನ ಬಟಾ ಬಯಲುಗಳಲಿ ದಾರ ಕಾಡಿದ ಗಾಳಿಪಟದ ಹಾಗೆ ನನ್ನ ಪುಟ್ಟ ಸೈಕಲ್ಲಿನಲಿ ಕೂತು ಊರು ಸುತ್ತುವುದಿಷ್ಟ, ಕದ್ದು ತಿನ್ನುವ ಪೇರಳೆ ಇಷ್ಟ, ಇವೆಲ್ಲದರ ಮಾಹಿತಿ ನಿನಗ್ಯಾರೋ ಕೊಟ್ಟೊರು? ಒಟ್ಟಾರೆ ನನ್ನ ಹಾಳು ಮಾಡಿದ್ದು ನೀನೇ. ನನಗೆ ಬೇಕಿರ್ಲಿಲ್ಲ ಈ ಪ್ರೀತಿ ಪ್ರೇಮ ಪ್ರಣಯ,! ಯಾತನೆ ಕಣೋ ನೀ ಇಲ್ದೆ. ಆದರೂ ನಿನ್ನ ಜೊತೆಗಿದ್ದ ಸಮಯದ ನೆನಪೇ ಒಂಥರಾ ಹಿತ.
ನೀ ಜೊತೆಗಿದ್ರೆ ನನಗದೇಷ್ಟು ಧರ್ಯ ಗೊತ್ತಾ? ಸಾವಿರ ಆನೆಯ ಬಲ. ನಿನ್ನ ಕೆನ್ನೆ ಕಚ್ಚಿ ತಿಂದು ಬಿಡುವಾ ಅನ್ನಿಸುತ್ತೆ ಕಣೋ ರಾಕ್ಷಸ. ನಿನಗೆ ನೋಯುತ್ತಲ್ವಾ ಅಂತ ಸುಮ್ಮನಿದಿನಿ ಅಷ್ಟೇ. ಹಾ ನನ್ನ ಗೆಳತಿಯರಿಗೆಲ್ಲ ಒಂದು ಸಾರ್ತಿ ವಾರ್ನ್ ಮಾಡಿದೀನಿ. ನೀ ನನ್ ಜೊತೆ ಇರೋವಾಗ ಅವರು ಹತ್ತಿರ ಸುಳಿಯುವ ಹಾಗಿಲ್ಲ ಅಂತ. ಯಾರಿಗೊತ್ತು ಯಾರಾ ದೃಷ್ಟಿ ಹೇಗಿರುತ್ತೆ ಅಂತ. ನಿನಗೊಂದು ದೃಷ್ಟಿ ಬೊಟ್ಟು ಇಟ್ಟೇ ಹೊರಗಡೆ ಕಳುಹಿಸ್ಬೆಕು ನೋಡು ಯಾವುದಕ್ಕೂ ನನ್ನ ಕುತ್ತಿಗೆಗೆ ನಿನ್ನ ಕೈ ಇಂದ ಮೂರು ಗಂಟು ಬೀಳ್ಲಿ. ಆವಾಗಿದೆ ಮಾರಿಹಬ್ಬ.
ನೀ ನನ್ನ ಸುಂದರ ಸ್ವಪ್ನ ಕಣೋ. ನಿನ್ನ ಕಿರುಬೆರಳು ಹಿಡಿದು ಜಗವ ಸುತ್ತಬೇಕೆಂಬ ಮಹದಾಸೆಯೊಂದಿದೆ, ಇಡೇರಿಸ್ತಿಯಾ? ಅವತ್ತಿನ ಹಾಗೆ ಇನ್ಯಾವತ್ತೂ ಗುಮ್ಮನ ಕಥೆ ಹೇಳಿ ನನ್ನ ಹೆದರಿಸಬೆಡ್ವೋ ಪ್ಲೀಸ್. ನೀ ಕೋಟಿ ಕೋಟಿ ದುಡಿದು ತಂದು ಸೂರಿಯ ಬೇಕು ಅಂತಿಲ್ವೋ, ನೆಮ್ಮದಿಯ ನಾಲ್ಕು ಕಾಸು ಸಂಪಾದನೆ ಸಾಕಷ್ಟೆ. ನಿನ್ನ ಕಷ್ಟ ಸುಖದ ಜೊತೆ ಹೆಜ್ಜೆ ನಾನಾಗಿರ್ತೀನಿ, ನೆರಳಾಗಿ ಜೊತೆಗೆ ನೀ ಇರು ಅಷ್ಟೆ. ಪುಟ್ಟ ಪುಟ್ಟ ಕನಸುಗಳ ಸರಮಾಲೆ ಇದೆ, ಸಮಯ ಬಂದಾಗ ನಾ ತಿಳಿಸ್ತೀನಿ. ಹಾ ನಿನಗೆ ತಿಳಿಯದೇ ಇರುವುದೆನೂ ಅಲ್ಲ ಅದು.
ನಿನ್ನ ಪ್ರೀತಿಯಲಿ ಮಿಂದುಂಡು ಖುಷಿಯಾಗಿದಿನೋ. ನಮ್ಮ ಕನಸುಗಳಿಗ್ಯಾವ ಕಾಟವಿಲ್ಲದಿರಲಿ. ಬಹುಬೇಗ ನಮ್ಮಿಬ್ಬರ ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟುವಂತಾಗ್ಲಿ. ಪೇ ಪೇ ಡುಂ ಡುಂ ಶಬ್ಧ ಕೆಳ್ಬೆಕು ಅನ್ನಿಸ್ತಿದೆ ನಿನ್ನ ಜೊತೆ ಮಂಟಪದೊಳಗೆ ಕೂತು. ಅರಿಶಿಣದಿಂದ ನನ್ನ್ ಮೈ ಬೇಗ ತೊಯ್ಯುವಂತೆ ಮಾಡ್ತಿಯ ಅಲ್ವಾ?
ಕನಸುಗಳ ಸರಮಾಲೆ ಕಣ್ಣೆದುರು ಕಟ್ಟಿರಲು
ಬದುಕು ನೀನೇ ಎಂಬ ಭರವಸೆ ಮನಕಿರಲು
ಕನಸೇ ಬದುಕಾಗಿ ,ನಗುವೇ ಜೀವನವಾಗಿ,
ಜೀವಕೆ ನೀ ಜೊತೆಯಾಗಿರಲು.... ಇನ್ನೇನು ಬೇಕು ಹೇಳು?
ಕಾಯ್ತಿರ್ತಿನ್ ಕಣೋ ರಾಕ್ಷಸ..........
ಸಾವಿರ ಕೋಟಿ ಸಿಹಿ ಮುತ್ತು ನಿನ್ನ ಹಣೆಗೆ ಕೆನ್ನೆಗೆ.
ನಿನ್ನ ಸುಬ್ಬುಲಕ್ಷ್ಮಿ.

Friday, December 6, 2013

ನೀ ಚೆಂದ ಇರು








ನಿನ್ನ ಕಣ್ಣಂಚಲಿ ಕಂಡ ಕಂಬನಿಯ ಮರೆಯೆ ನಾ ಇನ್ನೆಂದೂ
ನಿನ್ನ ದುಖಃವ ಸಹಿಸೆ ನಾ ಎಂದೂ..
ನನ್ನಿಂದ ನಿನಗೆ ಬಾರದೆಂದೂ ಕಷ್ಟ
ಇದು ಶತ ಸಿದ್ಧ.
ಬದುಕಲಿ ನೀ ಕಲಿಸಿದ ಹಲವಾರು ಪಾಠಗಳ ಮರೆಯುವುದುಂಟೇನು?
ಇಲ್ಲ ಇನಿಯೆ.
ಒಳಿತೊ ಕೆಡುಕೋ ನಾ ಬಾರೆನು ಇನ್ನೆಂದೂ ನಿನ್ನ ಬಾಳಲಿ.
ಕೊನೆಗೆ ಉಳಿದಿದಿರುವದೊಂದೇ ನನಗೆ 
ನಿನ್ನ ನಗುವ ನೆನಪಿನಾಸರೆ.
ದಯಮಾಡಿ ಕೇಳದಿರು ಅದ ನನ್ನಿಂದ.
ನೀ ನಿನ್ನ ನೆಮ್ಮದಿಯ ತೋಳ ಆಸರೆಯ ಬಳಿ ಸದಾ ಹಸಿರಾಗಿರು.
ನಾ ಭಾವುಕನೋ ಅರೆ ಹುಚ್ಚನೋ ಮೂರ್ಖನೋ ತಿಳಿಯೆ.
ನೀ ಖುಷಿಯಿಂದಿರು.

...................................................   ನಿಖಿಲ್   !!!


Monday, December 2, 2013

ಬರ್ತೀಯಾ ಅಲ್ವಾ


ಇದ್ದಕ್ಕಿದ್ದಂತೆ ನಿನ್ನ ನೋಡೋ ನೆನಪಾಗ್ಬಿಡತ್ತೆ ಕಣೆ, ಬಿಕ್ಕಿ ಬಿಕ್ಕಿ ಅಳುತ್ತೆ
ಮನಸು ಚಿಕ್ಕ ಮಗು ಅಮ್ಮ ಬೇಕು ಅಂತ ಅಳೋ ಹಾಗೆ.. ಎಸ್ಟೇ ಸಮಾಧಾನ ಮಾಡ್ಲಿನಾನು? ನನ್ನ 
ಎದೆಮೇಲೆ ಕೈ ಇಟ್ಟು ಜೋರಾಗಿ ಹೋಡ್‌ಕೊಳ್ತಿರೋ heart ನಾ ಸುಮ್ನೀರ್ಸೋಕೆ ನಾನು ಪಾಡೋ 
ಪಾಡು ಆಸ್ಟಿಸ್ಟಲ್ಲ. ಪಾಪ ಕಾಣೆ ನಾನು. ಕಣ್ಣ ಹನಿಗಳು ಕೆನ್ನೇನೂ ಸಕತ್ ಫ್ರೆಂಡ್ಸ್ 
ಆಗ್ಬಿಟ್ಟಿವೆ. ಒಂಥರಾ ನಂಟು ಅವುಗಳದ್ದು. ಬಿರು ಬಿಸಿಲಲ್ಲಿ ನೆನಪಾಗ್ತೀಯ ನಿಂಗೆ 
ಬಿಸಿಲು ತಾಗದಿರಲಿ ಅಂತ ನನ್ನ ಕೈಗಳನ್ನ ನಿಂಗಾಸರೆ ಮಾಡಿದ್ದು ಇನ್ನೂ ಹಸಿಯಾಗಿದೆ ಕಣೆ. 
ಹೇ.... ನೆನ್‌ಪಿದ್ಯಾ? ನಾನು ನಡುಗುತ್ತಾ ಇದ್ದೇ ನನ್ನ ಬೆಚ್ಚನೆ sweater ನಾ ನಿಂಗೆ 
ಅಂತ ಕೊಟ್ಟು ನೀನು ಬೆಚ್ಚಗಿರೊದ್ನ ನೋಡ್ಕೊಂಡು ಖುಷಿಪಡ್ತಿದ್ದೆ. ಒಂಥರ ನಾನು 
ಬೆಚ್ಚಗಾಗಿದ್ದೆ. ಮಳೆ ಅಂದ್ರೆ ನಿಂಗೆ ಇಸ್ಟ ಅಲ್ವಾ? ಮಳೆಲಿ ನೆನ್ನ್ಕೊಂಡು ನಾವು 
ಓಡಾಡದಿರೂ ಜಾಗಗಳು ಇದ್ಯಾ? ನಿನ್ನ ಅಪ್ಪುಗೆ ಬಿಸಿ ಸಿಹಿ ಚುಂಬನ ಎಲ್ಲ ಕಣ್ಣಮುಂದೆ ಹಚ್ಚ
ಹಸುರಾಗಿದೆ ಕಣೆ.

"ಭೂವೀ ಕೆನ್ನೆ ತುಂಬಾ ಮುಗಿಲು ಸುರಿದ ಮುತ್ತಿನ ಗುರುತು ನನ್ನ ಎದೆಯ ತುಂಬಾ ನೀನು ಬಂದ ಹೆಜ್ಜೆಯ ಗುರುತು" 
ಮತ್ತೆ ಚಳಿಗಾಲ ಕಣೇ... ಇವಾಗ ನಿನ್ನ ಮರ್ಯೋಕೆ ಸಾಧ್ಯಾನ? ನಿನ್ನ ಹಿತವಾದ ಬಿಸಿ ಅಪ್ಪುಗೇನ 
ಮರೆಯೋದು ಅಸಾಧ್ಯ ಕಣೆ. ಅಸಲಿಗೆ ನಿಂಗೆ ಅರ್ಥ ಆಗ್ದೆಇರೊದು ಏನೇ ಇದೆ?... ನನ್ನ್ ಕಿಂತ 
ನನ್ನ್ ಬಗ್ಗೆ ಹೆಚ್ಚಾಗಿ ಗೊತ್ತಿರೋದು ನಿನ್ಗೇ ಅಲ್ವೇನೇ? ನನ್ನ ಮನದ ಬಾಗಿಲನ್ನ 
ತೆರೆದಿಟ್ಟು ಕೊರೆಯೊ ಚಳಿಯಲ್ಲಿ ಕಾಯ್ತ್ತಿದಿನ್ ಕಣೆ......... ನಿನ್ಗೂಸ್ಕರ ಬಿಸಿ 
ಬಿಸಿ ಅಡುಗೆ ಕೂಡ reddy ಇದೆ. ನನ್ನ ಹಿತವಾದ ಪ್ರೀತಿ ಮಜವಾದ ಮಾತು ಬಿಸಿ ಬಿಸಿ 
ಅಪ್ಪುಗೆಯ ಜೊತೆ ಸಿಹಿ ಚುಂಬನ ಕೂಡ......... ಬರ್ತೀಯಾ ಅಲ್ವಾ

Friday, November 29, 2013

ನಿನ್ನವನಾಗದ ಹುಡುಗ


"ನಾಳೆ ಆದ್ರೆ ಸಿಗ್ತೀನಿ ಇಲ್ಲ ಅಂದ್ರೆ ಬೇಜಾರು ಮಾಡ್ಕೋಬೇಡ್ವೋ. 

ನೀ ಕಳುಹಿಸಿದ ಈ ಕೊನೆಯ ಸಾಲುಗಳು ಮನಸನ್ನ ತುಂಬಾ ಚುಚ್ಚಿದ್ದು ನಿಜ.
ಮರೆಯಲಾರದ ಗೆಳತಿ ನೀನು.
ನಮ್ಮ ಮಧುರ ಗೆಳೆತನಕ್ಕೆ ನಾ ಇನ್ನೂ ಹೆಸರನ್ನೇ ಇಟ್ಟಿರಲಿಲ್ಲ. ಅಸ್ಟರಲ್ಲೇ ಅದ್ಯಾವ ಅಪಸ್ವರ ಬಂದು ಬಡಿಯಿತೋ ತಿಳಿಯಲೇ ಇಲ್ಲ.

ನೀ ನನ್ನ ಪ್ರೀತಿಯ ಹುಡುಗಿ ಅಲ್ಲ ಚೆಲುವೆ
ಇನ್ನಂತೂ ಅಲ್ಲವೇ ಅಲ್ಲ
ಮುಗಿಯಿತು ಹೆಸರಿಡದ ನಮ್ಮ ಮಧುರ ಭಾವ ಸಂಭಂದ.
ನಾ ಕವಿಯಾದೆ ನಾ ಸವೆದೆ.
ನೀನಾದರೂ ದೂರ ತೀರದ ದಡ ಸೇರು
ಪ್ರೀತಿ ಇಲ್ಲ.
ದ್ವೆಶವೂ ಇಲ್ಲ
ಬರೀ ಭಾರದ ನೋವಸ್ಟೆ ನೆನಪಾಗಿ ಉಳಿದಿರುವದು.

ದಿನಗಳು ಕಳೆದಂತೆ ಹಳೆಯ ಹಾಳೆಯ ಮರೆತು ನೀ ಹೊರಟ ಪರಿಯ ನೋಡೆ ನನಗೆ ಅನ್ನಿಸಿತ್ತು ಕಣೆ ನೀ ನನಗೆ ದೊರಕದ ಮಾಣಿಕ್ಯ ಅಂತ.
ಆದರೂ ಮನಸಿನ ಪುಟ್ಟ ಕೋಣೆಯೊಳಗೆ ನಿನ್ನ ಮನಸಾರೆ ಪ್ರೀತಿಸುತ್ತಿದ್ದೆ ನನಗೂ ತಿಳಿಯದ ಹಾಗೆ.
ಭವಸಾಗರದಾಚೆ ನಿನ್ನ ಜೊತೆ ಕೈ ಹಿಡಿದು ಸುತ್ತಾಡೊ ಕನಸು ಕೊನೆಗೂ ನನಸಾಗಲೇ ಇಲ್ಲ ನೋಡು.
ವಿಪರ್ಯಾಸದ ಸಂಗತಿ ಅಂದರೆ ಈ ನಾಲ್ಕು ಸಾಲುಗಳನ್ನ ನಾ ಮೂರು ಸಮುದ್ರದಾಚೆ ಇರೋ ಉರಿನಿಂದಲೇ ಗೀಚುತ್ತ ಇದೀನಿ.
ನನ್ನ ಕಿರುಬೆರಳಿಗೆ ನಿನ್ನ ಕಿರುಬೆರಳ ತಾಗಿಸಿ ಸಮಯದ ಪರಿವೆ ಇಲ್ಲದೆ ಇಲ್ಲಿನ ಮಜವಾದ ಹೆಸರಿರುವ ರಸ್ತೆಯಲ್ಲಿ ಸುತ್ತಾಡಲು ನೀ ಇಲ್ಲ ಅಸ್ಟೆ. ಯಾವ  ಯಾರ ಭಯದ ಅಂಜಿಕೆ ಇಲ್ಲದೆ ನಿನ್ನ ಜೊತೆಗಿರಲು,  ಸೊಗಸಾಗಿ ಸಂಭ್ರಮಿಸಲು ನೀ ಇಲ್ಲ ಅಸ್ಟೇ.

ಇರಲಿ ಬಿಡು.
ನಿನ್ನ ಸುಂದರ ಕಂಗಳ ಹುಡುಗ ಹೇಗಿದ್ದಾನೆ?
Thanks  ಕಣೆ. ನನ್ನ ಮಾತಿಗೆ ಬೆಲೆಕೊಟ್ಟು ನೀ ಅವನನ್ನ Meet ಮೀಟ್ ಮಾಡಿಸ್ಲೆ ಇಲ್ಲ. ನೀ ಅವನ ಕೈ ಹಿಡಿದು ನಿನ್ನ ಹಣೆಯನ್ನ ಅವನ ಭುಜಕ್ಕೊರಗಿಸಿ ಮೀಟ್ ಮಿಸ್ಟರ್ ಪರ್ಫೆಕ್ಟ್ ಅಂತ ಅಂದಿದ್ದಿದ್ರೆ ನಾ ಕುಸಿದು ಬೀಳೋದು ನಿಜವಾಗಿತ್ತು. ಅದೇ ಭಯ ಇವತ್ತಿಗುನೂ ಇದೆ. ಅದಿಕ್ಕೆ ನಿಮ್ಮನ್ನ ನಾನು ಬಯಸಿಯೂ ಹುಡುಕೊಲ್ಲ. ಈ ಹಾಳಾದ facebook ನಲ್ಲಿ ನಿನ್ನನ್ನ ಅಲ್ಲ ಅಲ್ಲ ನಿಮ್ಮನ್ನ ಹುಡುಕೋ ಪ್ರಯತ್ನ ಮಾಡಿದ್ದು ನಿಜ. ಆದರೆ ನನ್ನ ನನಗಿಂತ ಹೆಚ್ಚಾಗಿ ಪ್ರೀತಿಸೋ ಈ ಹಾಳು ಮನಸ್ಸು ನನ್ನ ತಡೆದಿದ್ದು. ಈ ಕಳೆದ 3 ವರ್ಷಗಳಲ್ಲಿ ನಾ ನಿನ್ನ ಬಯಸಿಯೂ ನೋಡದಿರುವದಕ್ಕೆ ಈ ಹಾಳಾದ ಮನಸೇ ಕಾರಣ. 
ಸಂಜೆಯ ತಂಪು ನೆತ್ತಿಯ ನಾಟುತ್ತಿದ್ದಂತೆ ಜಾಗ್ರತ ವಾಗುತ್ತಿದ್ದ ಮನಸಿನ ನಾಟಕದ ಬಗೆ ಅಬ್ಬಬ್ಬಾ ಭಯಂಕರ. ನೀ ಬೇಕು, ನೀ ಬೇಕು, ನಿನ್ನ ಸನಿಹ ಬೇಕು, ನಿನ್ನ ಸಾಂಗತ್ಯ ಬೇಕು. ಕೊನೆಗೆ ಏನೂ ಇಲ್ಲದ ಪಕ್ಷದಲ್ಲಿ ನಿನ್ನ ಮುಖ ನೋಡದಿದ್ದರೂ ಪರವಾಗಿಲ್ಲ ನಿನ್ನ ನೆರಳಾದರೂ ಸರಿಯೆ. ಅದನ್ನಾದರೂ ನೋಡಿ ನೆಮ್ಮದಿಯ ನಿಟ್ಟುಸಿರು ಬಿಡೋಣ ಅಂತ ಒಂದೇ ಸಮನೆ ಹಠ ರಂಪ ಮಾಡೋ ಈ ಮನಸನ್ನ ಹತೋಟಿಗೆ ತರಲು ನನ್ನ ಗೆಳೆಯ ಕೊಡಿಸಿದ ಸ್ಕಾಚ್ ಸಿಪ್ಪೇರಿಸುತ್ತಿದ್ದೆ.  ಉಸಿರಾಡುವ ಹೆಣವಾಗುತ್ತಿದ್ದೆ. 

ಮತ್ಯಾವ ಆಸೆಯೂ ಇಲ್ಲ ಚೆಲುವೆ.
ನಾ ನಿನಗೆ ಇಟ್ಟಿದ್ದ ಸರಿ ಸುಮಾರು ಮೂರೂವರೆ ಸಾವಿರ ಹೆಸರುಗಳು ನಂಗಿನ್ನೂ ನೆನಪಿದೆ. ಅದೆಲ್ಲವನ್ನ ಒಂದೇ ಉಸಿರಿನಲ್ಲಿ ಮತ್ತೊಮ್ಮೆ ನಿನ್ನ ಎದುರು ಉಸುರುವ ಬಯಕೆ ಆಗ್ತಾ ಇದೆ. ಮೊದಲಿನ ಹಾಗೆ ಕಾಯ್ತಾ ಇರ್ತೀನಿ ನಿನ್ನ ಮನೆಯಿಂದ ಮೂರು ರೋಡು ಆಚೆ ಇರೋ ಕಲ್ಲಿನ ಬೆಂಚಿನ ಮೇಲೆ ಭಾರವಾದ ಮನಸನ್ನ ಹೊತ್ತು ಕೊಂಡು. ಯಾರಿಗೂ ತಿಳಿಯದ ಹಾಗೆ ಬರ್ತೀಯಾ? 
ದಿನಾಂಕ ಸಮಯವನ್ನೆಲ್ಲ ನೀನೇ ನಿರ್ಧರಿಸು. ಯಾಕಂದ್ರೆ ಇವಾಗ ನೀ ನನ್ನ ಸ್ವತ್ತಲ್ಲ. ಪ್ರಪಂಚದ ಪರಿವಿಲ್ಲದ ನನ್ನ ಪುಟ್ಟ ಗುಬ್ಬಿ ಮರಿಯನ್ನ ಪಟಾಯಿಸಿ ಮದುವೆಯಾದ ಆ ಹುಡುಗನ ಹೆಂಡತಿ ನೀ ಈಗ. ಆತನ ಹೆಸರನ್ನೂ ಕೂಡ ನಾ ನನ್ನ ನಾಲಿಗೆಯ ಮೇಲೆ ಹರಿದಾಡಲು ಬಿಡುವದಿಲ್ಲ. ಕೊನೆಯ ಸಾರ್ತಿ ನಾ ಅವನ ಹೆಸರನ್ನ ನಿನ್ನ ಮದುವೆ ಆಮಂತ್ರಣ ಪತ್ರಿಕೆಯ ಮೇಲೇನೆ ನೋಡಿದ್ದು . 
ನಕ್ಕಿದ್ದು ನಿಜ.
ಆಮಂತ್ರಣ ಪತ್ರಿಕೆಯ ಒಳಗೆ ನಿನ್ನ ಜೊತೆ ನನ್ನ ಮದುವೆ ಅಂತ ಬರೆದಿರಬೇಕಾಗಿದ್ದ ಹೆಸರು  ಪತ್ರಿಕೆಯ ಹೊರಗೆ ಬರೆದಿತ್ತು. 

ಗೆ,
ಶ್ರೀಮತಿ / ಶ್ರೀ  ಮನೋಹರ 
# 214, Newtown. U K
ಹ ಹ ಹ ಗಹ ಗಹಿಸಿ ನಕ್ಕಿದ್ದೆ ನಾ ಆದಿನ. ಕಣ್ಣ ಹನಿ ಕೆನ್ನೆಯ ಜೊತೆ ಮಾತಾಡುತ್ತಿತ್ತು ಯಾರಿಗೂ ತಿಳಿಯದ ಹಾಗೆ.

ಒಂದು ಪುಟ್ಟ ಇನ್ನೊಂದು ಬಯಕೆ. ಬರುವಾಗ ನಾ ಕೊಡಿಸಿದ ತಿಳಿ ಗುಲಾಬಿ ಬಣ್ಣದ ಸೆಲ್ವಾರ್ ಹಾಕ್ಕೊಂಡ್ ಬರ್ತೀಯಾ?
ಅದು ನಿನಗೆ ಇಸ್ಟವಾದ ಡ್ರೆಸ್. ಇವತ್ತಿಗೂ ಕೂಡ ಅದನ್ನ ಇಸ್ತ್ರಿ ಮಾಡಿ ಗರಿ ಗರಿಯಾಗಿ ಇಟ್ಟಿರ್ತಿಯ ಅನ್ನೋ ನಂಬಿಕೆ. ಹುಸಿ ಮಾಡಬೇಡ.
ಮತ್ತೆ ನಿನಗೆ ಇಸ್ಟ ಅಂತ ನಾನೇ ಕಯ್ಯಾರೆ ತುಪ್ಪ ಸುರಿದು ಮಾಡಿದ Carrot ಹಲ್ವಾ ತರ್ತೀನಿ. ನಿನ್ನ ಪುಟ್ಟ ಹೊಟ್ಟೆಯಲ್ಲಿ ಚೂರು ಜಾಗ ಇಟ್ಕೊಂಡು ಬಾ. ಕೊನೆಯ ಸಲ ನಾನೇ ನನ್ನ ಕಯ್ಯಾರೆ ತಿನ್ನಿಸಬೇಕು. ಅಮ್ಮ ತನ್ನ ಕಂದಮ್ಮನಿಗೆ 
ಉಟ ಉಣ್ಣಿಸಿದ ಹಾಗೆ

ಉತ್ತರಕ್ಕಾಗಿ ಕಾಯ್ತಾ ಇರ್ತೀನಿ.
ಹಾ ನಮ್ಮಿಬ್ಬರ ಗೆಳೆತನಕ್ಕೆ - ಸಂಭಂದಕ್ಕೆ ಒಂದು ಹೆಸರಿಡಬೇಕು. ಅದೇನು ಅಂತ ತುಸು ಯೋಚಿಸಿ ಆ ದಿನವೇ ತಿಳಿಸು.
ನಮ್ಮ ಸಂಭಂದಕ್ಕೂ ಒಂದು ಹೆಸರಿರಲಿ


ಎಂದಿನಂತೆ
ಒಂದು Tight Huggy
ಒಂದು ಪಪ್ಪಿ.

ನಿನ್ನವನಾಗದ ಹುಡುಗ
ಮನೋಹರ B.

Tuesday, November 26, 2013

ಬಯಕೆ










ನಿನ್ನ ನಗುವ ಮುಂಗುರುಳ ಮಡಚಿ 
ನಿನ್ನ್ ಹಣೆಯ ಮೇಲೊಂದ ಸಿಹಿಮುತ್ತಾ ನೀಡುವ ಬಯಕೆ
ಅತಿಯಾದ ಪ್ರೀತಿಯಿಂದ ಬಳಸಿ ನಿನ್ನ ನನ್ನ ತೋಳ್ಗಳಲಿ
ಸಿಹಿ ಮುತ್ತ ನನಗೂ ನೀಡೇ... ಅಂತ ಪೀಡಿಸುವಾ ಬಯಕೆ
ಬಿಸಿಯಪ್ಪುಗೆಯ ಜೊತೆ ಸಿಹಿ ಚುಂಬನವಾ ಪಡೆದು ಧನ್ಯ ನಾಗುವಾ ಬಯಕೆ
ಬಯಸಿ ಬಿಸಿಯುಸಿರ ಜೊತೆ ಒಂದಾಗಿ ನಿನ್ನ ತೋಳ ತೆಕ್ಕೆಯಲಿ ನಲಿಯುವಾ ಬಯಕೆ.
ನಿನ್ನ ನಗುವನ್ನ ನಗು ಮೊಗವನ್ನ ನೆನೆಯುತ್ತ ನನ್ನೀ ಜೀವನವ ಸವೆಸುವಾ ಬಯಕೆ.
ನೂರುಕಾಲ ನಿನ್ನ ಜೊತೆ ಅನ್ನೋ ನಿರೀಕ್ಷೆ ಇಲ್ಲ ಇನಿಯೆ
ಮೂರು ಕ್ಷಣವಾದರೂ ಸರಿಯೆ.
ನಿನ್ನವನಾಗಿಯೇ ಇರುವ ಬಯಕೆ. 

.............................. ನಿಖಿಲ್.!!