"ನಾಳೆ ಆದ್ರೆ ಸಿಗ್ತೀನಿ ಇಲ್ಲ ಅಂದ್ರೆ ಬೇಜಾರು ಮಾಡ್ಕೋಬೇಡ್ವೋ.
ನೀ ಕಳುಹಿಸಿದ ಈ ಕೊನೆಯ ಸಾಲುಗಳು ಮನಸನ್ನ ತುಂಬಾ ಚುಚ್ಚಿದ್ದು ನಿಜ.
ಮರೆಯಲಾರದ ಗೆಳತಿ ನೀನು.
ನಮ್ಮ ಮಧುರ ಗೆಳೆತನಕ್ಕೆ ನಾ ಇನ್ನೂ ಹೆಸರನ್ನೇ ಇಟ್ಟಿರಲಿಲ್ಲ. ಅಸ್ಟರಲ್ಲೇ ಅದ್ಯಾವ ಅಪಸ್ವರ ಬಂದು ಬಡಿಯಿತೋ ತಿಳಿಯಲೇ ಇಲ್ಲ.
ನೀ ನನ್ನ ಪ್ರೀತಿಯ ಹುಡುಗಿ ಅಲ್ಲ ಚೆಲುವೆ
ಇನ್ನಂತೂ ಅಲ್ಲವೇ ಅಲ್ಲ
ಮುಗಿಯಿತು ಹೆಸರಿಡದ ನಮ್ಮ ಮಧುರ ಭಾವ ಸಂಭಂದ.
ನಾ ಕವಿಯಾದೆ ನಾ ಸವೆದೆ.
ನೀನಾದರೂ ದೂರ ತೀರದ ದಡ ಸೇರು
ಪ್ರೀತಿ ಇಲ್ಲ.
ದ್ವೆಶವೂ ಇಲ್ಲ
ಬರೀ ಭಾರದ ನೋವಸ್ಟೆ ನೆನಪಾಗಿ ಉಳಿದಿರುವದು.
ದಿನಗಳು ಕಳೆದಂತೆ ಹಳೆಯ ಹಾಳೆಯ ಮರೆತು ನೀ ಹೊರಟ ಪರಿಯ ನೋಡೆ ನನಗೆ ಅನ್ನಿಸಿತ್ತು ಕಣೆ ನೀ ನನಗೆ ದೊರಕದ ಮಾಣಿಕ್ಯ ಅಂತ.
ಆದರೂ ಮನಸಿನ ಪುಟ್ಟ ಕೋಣೆಯೊಳಗೆ ನಿನ್ನ ಮನಸಾರೆ ಪ್ರೀತಿಸುತ್ತಿದ್ದೆ ನನಗೂ ತಿಳಿಯದ ಹಾಗೆ.
ಭವಸಾಗರದಾಚೆ ನಿನ್ನ ಜೊತೆ ಕೈ ಹಿಡಿದು ಸುತ್ತಾಡೊ ಕನಸು ಕೊನೆಗೂ ನನಸಾಗಲೇ ಇಲ್ಲ ನೋಡು.
ವಿಪರ್ಯಾಸದ ಸಂಗತಿ ಅಂದರೆ ಈ ನಾಲ್ಕು ಸಾಲುಗಳನ್ನ ನಾ ಮೂರು ಸಮುದ್ರದಾಚೆ ಇರೋ ಉರಿನಿಂದಲೇ ಗೀಚುತ್ತ ಇದೀನಿ.
ನನ್ನ ಕಿರುಬೆರಳಿಗೆ ನಿನ್ನ ಕಿರುಬೆರಳ ತಾಗಿಸಿ ಸಮಯದ ಪರಿವೆ ಇಲ್ಲದೆ ಇಲ್ಲಿನ ಮಜವಾದ ಹೆಸರಿರುವ ರಸ್ತೆಯಲ್ಲಿ ಸುತ್ತಾಡಲು ನೀ ಇಲ್ಲ ಅಸ್ಟೆ. ಯಾವ ಯಾರ ಭಯದ ಅಂಜಿಕೆ ಇಲ್ಲದೆ ನಿನ್ನ ಜೊತೆಗಿರಲು, ಸೊಗಸಾಗಿ ಸಂಭ್ರಮಿಸಲು ನೀ ಇಲ್ಲ ಅಸ್ಟೇ.
ಇರಲಿ ಬಿಡು.
ನಿನ್ನ ಸುಂದರ ಕಂಗಳ ಹುಡುಗ ಹೇಗಿದ್ದಾನೆ?
Thanks ಕಣೆ. ನನ್ನ ಮಾತಿಗೆ ಬೆಲೆಕೊಟ್ಟು ನೀ ಅವನನ್ನ Meet ಮೀಟ್ ಮಾಡಿಸ್ಲೆ ಇಲ್ಲ. ನೀ ಅವನ ಕೈ ಹಿಡಿದು ನಿನ್ನ ಹಣೆಯನ್ನ ಅವನ ಭುಜಕ್ಕೊರಗಿಸಿ ಮೀಟ್ ಮಿಸ್ಟರ್ ಪರ್ಫೆಕ್ಟ್ ಅಂತ ಅಂದಿದ್ದಿದ್ರೆ ನಾ ಕುಸಿದು ಬೀಳೋದು ನಿಜವಾಗಿತ್ತು. ಅದೇ ಭಯ ಇವತ್ತಿಗುನೂ ಇದೆ. ಅದಿಕ್ಕೆ ನಿಮ್ಮನ್ನ ನಾನು ಬಯಸಿಯೂ ಹುಡುಕೊಲ್ಲ. ಈ ಹಾಳಾದ facebook ನಲ್ಲಿ ನಿನ್ನನ್ನ ಅಲ್ಲ ಅಲ್ಲ ನಿಮ್ಮನ್ನ ಹುಡುಕೋ ಪ್ರಯತ್ನ ಮಾಡಿದ್ದು ನಿಜ. ಆದರೆ ನನ್ನ ನನಗಿಂತ ಹೆಚ್ಚಾಗಿ ಪ್ರೀತಿಸೋ ಈ ಹಾಳು ಮನಸ್ಸು ನನ್ನ ತಡೆದಿದ್ದು. ಈ ಕಳೆದ 3 ವರ್ಷಗಳಲ್ಲಿ ನಾ ನಿನ್ನ ಬಯಸಿಯೂ ನೋಡದಿರುವದಕ್ಕೆ ಈ ಹಾಳಾದ ಮನಸೇ ಕಾರಣ.
ಸಂಜೆಯ ತಂಪು ನೆತ್ತಿಯ ನಾಟುತ್ತಿದ್ದಂತೆ ಜಾಗ್ರತ ವಾಗುತ್ತಿದ್ದ ಮನಸಿನ ನಾಟಕದ ಬಗೆ ಅಬ್ಬಬ್ಬಾ ಭಯಂಕರ. ನೀ ಬೇಕು, ನೀ ಬೇಕು, ನಿನ್ನ ಸನಿಹ ಬೇಕು, ನಿನ್ನ ಸಾಂಗತ್ಯ ಬೇಕು. ಕೊನೆಗೆ ಏನೂ ಇಲ್ಲದ ಪಕ್ಷದಲ್ಲಿ ನಿನ್ನ ಮುಖ ನೋಡದಿದ್ದರೂ ಪರವಾಗಿಲ್ಲ ನಿನ್ನ ನೆರಳಾದರೂ ಸರಿಯೆ. ಅದನ್ನಾದರೂ ನೋಡಿ ನೆಮ್ಮದಿಯ ನಿಟ್ಟುಸಿರು ಬಿಡೋಣ ಅಂತ ಒಂದೇ ಸಮನೆ ಹಠ ರಂಪ ಮಾಡೋ ಈ ಮನಸನ್ನ ಹತೋಟಿಗೆ ತರಲು ನನ್ನ ಗೆಳೆಯ ಕೊಡಿಸಿದ ಸ್ಕಾಚ್ ಸಿಪ್ಪೇರಿಸುತ್ತಿದ್ದೆ. ಉಸಿರಾಡುವ ಹೆಣವಾಗುತ್ತಿದ್ದೆ.
ಮತ್ಯಾವ ಆಸೆಯೂ ಇಲ್ಲ ಚೆಲುವೆ.
ನಾ ನಿನಗೆ ಇಟ್ಟಿದ್ದ ಸರಿ ಸುಮಾರು ಮೂರೂವರೆ ಸಾವಿರ ಹೆಸರುಗಳು ನಂಗಿನ್ನೂ ನೆನಪಿದೆ. ಅದೆಲ್ಲವನ್ನ ಒಂದೇ ಉಸಿರಿನಲ್ಲಿ ಮತ್ತೊಮ್ಮೆ ನಿನ್ನ ಎದುರು ಉಸುರುವ ಬಯಕೆ ಆಗ್ತಾ ಇದೆ. ಮೊದಲಿನ ಹಾಗೆ ಕಾಯ್ತಾ ಇರ್ತೀನಿ ನಿನ್ನ ಮನೆಯಿಂದ ಮೂರು ರೋಡು ಆಚೆ ಇರೋ ಕಲ್ಲಿನ ಬೆಂಚಿನ ಮೇಲೆ ಭಾರವಾದ ಮನಸನ್ನ ಹೊತ್ತು ಕೊಂಡು. ಯಾರಿಗೂ ತಿಳಿಯದ ಹಾಗೆ ಬರ್ತೀಯಾ?
ದಿನಾಂಕ ಸಮಯವನ್ನೆಲ್ಲ ನೀನೇ ನಿರ್ಧರಿಸು. ಯಾಕಂದ್ರೆ ಇವಾಗ ನೀ ನನ್ನ ಸ್ವತ್ತಲ್ಲ. ಪ್ರಪಂಚದ ಪರಿವಿಲ್ಲದ ನನ್ನ ಪುಟ್ಟ ಗುಬ್ಬಿ ಮರಿಯನ್ನ ಪಟಾಯಿಸಿ ಮದುವೆಯಾದ ಆ ಹುಡುಗನ ಹೆಂಡತಿ ನೀ ಈಗ. ಆತನ ಹೆಸರನ್ನೂ ಕೂಡ ನಾ ನನ್ನ ನಾಲಿಗೆಯ ಮೇಲೆ ಹರಿದಾಡಲು ಬಿಡುವದಿಲ್ಲ. ಕೊನೆಯ ಸಾರ್ತಿ ನಾ ಅವನ ಹೆಸರನ್ನ ನಿನ್ನ ಮದುವೆ ಆಮಂತ್ರಣ ಪತ್ರಿಕೆಯ ಮೇಲೇನೆ ನೋಡಿದ್ದು .
ನಕ್ಕಿದ್ದು ನಿಜ.
ಆಮಂತ್ರಣ ಪತ್ರಿಕೆಯ ಒಳಗೆ ನಿನ್ನ ಜೊತೆ ನನ್ನ ಮದುವೆ ಅಂತ ಬರೆದಿರಬೇಕಾಗಿದ್ದ ಹೆಸರು ಪತ್ರಿಕೆಯ ಹೊರಗೆ ಬರೆದಿತ್ತು.
ಗೆ,
ಶ್ರೀಮತಿ / ಶ್ರೀ ಮನೋಹರ
# 214, Newtown. U K
ಹ ಹ ಹ ಗಹ ಗಹಿಸಿ ನಕ್ಕಿದ್ದೆ ನಾ ಆದಿನ. ಕಣ್ಣ ಹನಿ ಕೆನ್ನೆಯ ಜೊತೆ ಮಾತಾಡುತ್ತಿತ್ತು ಯಾರಿಗೂ ತಿಳಿಯದ ಹಾಗೆ.
ಒಂದು ಪುಟ್ಟ ಇನ್ನೊಂದು ಬಯಕೆ. ಬರುವಾಗ ನಾ ಕೊಡಿಸಿದ ತಿಳಿ ಗುಲಾಬಿ ಬಣ್ಣದ ಸೆಲ್ವಾರ್ ಹಾಕ್ಕೊಂಡ್ ಬರ್ತೀಯಾ?
ಅದು ನಿನಗೆ ಇಸ್ಟವಾದ ಡ್ರೆಸ್. ಇವತ್ತಿಗೂ ಕೂಡ ಅದನ್ನ ಇಸ್ತ್ರಿ ಮಾಡಿ ಗರಿ ಗರಿಯಾಗಿ ಇಟ್ಟಿರ್ತಿಯ ಅನ್ನೋ ನಂಬಿಕೆ. ಹುಸಿ ಮಾಡಬೇಡ.
ಮತ್ತೆ ನಿನಗೆ ಇಸ್ಟ ಅಂತ ನಾನೇ ಕಯ್ಯಾರೆ ತುಪ್ಪ ಸುರಿದು ಮಾಡಿದ Carrot ಹಲ್ವಾ ತರ್ತೀನಿ. ನಿನ್ನ ಪುಟ್ಟ ಹೊಟ್ಟೆಯಲ್ಲಿ ಚೂರು ಜಾಗ ಇಟ್ಕೊಂಡು ಬಾ. ಕೊನೆಯ ಸಲ ನಾನೇ ನನ್ನ ಕಯ್ಯಾರೆ ತಿನ್ನಿಸಬೇಕು. ಅಮ್ಮ ತನ್ನ ಕಂದಮ್ಮನಿಗೆ
ಉಟ ಉಣ್ಣಿಸಿದ ಹಾಗೆ
ಉತ್ತರಕ್ಕಾಗಿ ಕಾಯ್ತಾ ಇರ್ತೀನಿ.
ಹಾ ನಮ್ಮಿಬ್ಬರ ಗೆಳೆತನಕ್ಕೆ - ಸಂಭಂದಕ್ಕೆ ಒಂದು ಹೆಸರಿಡಬೇಕು. ಅದೇನು ಅಂತ ತುಸು ಯೋಚಿಸಿ ಆ ದಿನವೇ ತಿಳಿಸು.
ನಮ್ಮ ಸಂಭಂದಕ್ಕೂ ಒಂದು ಹೆಸರಿರಲಿ
ಎಂದಿನಂತೆ
ಒಂದು Tight Huggy
ಒಂದು ಪಪ್ಪಿ.
ನಿನ್ನವನಾಗದ ಹುಡುಗ
ಮನೋಹರ B.



