ಅಯ್ಯಯ್ಯೋ ಲೇಟ್ ಆಗ್ ಹೋಯ್ತು ಕಣೆ ಅಂತ ನನ್ ಧರ್ಮ ಪತ್ನಿಗೆ ಬಾಯ್ ಹೇಳಿ ಸಿಗ್ನಲ್ ಗಳನ್ನು ಲೆಕ್ಕಿಸದೆ ಸಂದಿ ಗೊಂದಿಗಳನ್ನ ದಾಟಿ ಅಂತೂ ಇಂತೂ ಮೆಜೆಸ್ಟಿಕ್ಕ್ ಗೆ ತಲುಪಿದಾಗ ಘಂಟೆ ಒಂಭತ್ತು ಆಗೋಗಿತ್ತು. ಸರಸರನೆ ನನ್ನ ಬೈಕ್ ನ ಪಾರ್ಕ್ ಮಾಡೋಣ ಅಂತ ಹೋದ್ರೆ ಅಲ್ಲಿದ್ದ ಆಸಾಮಿ " ಸರ್ ಪಾರ್ಕಿಂಗ್ ಮಾಡೋಕಾಗಲ್ಲ ಸರ್ ನಿಮ್ಮ ಬೈಕ್ ಉದ್ದ ಇದೆ ಇಲ್ಲಿ ಪಾರ್ಕ್ ಮಾಡಿದ್ರೆ ವಾಪಸ್ ತೆಗ್ಯೋದು ಕಸ್ಟ ರೈಲ್ವೆ ಸ್ಟೇಶನ್ ಹತ್ರ ಮಾಡ್ಬಿಡಿ ಸರ್" ಅಂತ ಗುರ್ರ್ ಅಂತಾನೆ ಅಂದ. ಥತ್ ಹಾಳಾದೋನು ಅಂತ ಮನಸಲ್ಲೇ ಬೈಕೊಂಡು ಮತ್ತೆ ಒಂದು ದೊಡ್ಡ ರೌಂಡ್ ಹಾಕಿ ರೈಲ್ವೆ ಸ್ಟೇಶನ್ ಕಡೆಗೆ ಹೋಗಿ ಪಾರ್ಕ್ ಮಾಡಿ ಬರ್ತಿದ್ದಂಗೆ ಮತ್ತೊಬ್ಬ ಬಿಳಿ ಟೋಪಿ ಬಿಳಿ ಶರ್ಟ್ ಧರಿಸಿದ್ದ ಆಸಾಮಿ ಎದುರಾಗಿ ನಿಮ್ಮ ಬೈಕ್ ಡಾಕ್ಯುಮೆಂಟ್ಸ್ ಕೊಡಿ ಲೈಸೆನ್ಸ್ ತೋರ್ಸಿ , ನೀವು ಒನ್ ವೇ ಯಲ್ಲಿ ಬಂದ್ರಿ ಒಳಗಡೆ ಅದು ಇದು ಅಂತ ಶುರು ಮಾಡ್ಕೊಂಡ. ಮೊದ್ಲೇ ಲೇಟ್ ಆಗಿದ್ಕೆ ಸಿಟ್ಟಲ್ಲಿದ್ದಿದ್ ನನಗೆ ಒಂದು ಕ್ಷಣ ಏನು ಮಾಡ್ಬೇಕೋ ತೋಚ್ಲಿಲ್ಲ. ಹಂಗೆ ಗುರಾಯ್ಸಿ ಮುಖ ಕೆಂಪ್ಗೆ ಮಾಡ್ಕೊಂಡು " ಏನ್ರೀ ಮಾಡೊದ್ ಇವಾಗ?" ಅಂದಿದ್ದಕ್ಕೆ ಆ ಮುಂಡೇದು ಫೈನ್ ಕಟ್ಬೇಕಾಗತ್ತೆ , ಕೋರ್ಟ್ ನಲ್ಲಿ ಫೈನ್ ಕಟ್ಟಿ ನಮ್ ಸ್ಟೇಶನ್ ಹತ್ರ ಬಂದು ರಸೀದಿ ತೋರ್ಸಿ ನಿಮ್ ಲೈಸೆನ್ಸ್ ನಾ ವಾಪಸ್ ತಗೊಂಡು ಹೋಗಿ ಅಂತ ಅತೀ ವಿನಯದಿಂದಾನೆ ಅಂದ. ಮಾತಾಡೋವಾಗ್ಲೆಲ್ಲ ಅದ್ಯಾಕೆ ನನ್ ಕೈ ನಲ್ಲಿದ್ದಿದ್ ಪರ್ಸ್ ನೊಡ್ತಿದ್ದಾ ಅಂತ ತತ್ಕ್ಷಣ ಗೊತ್ತಾಗೋಯ್ತು. ನಾನೇನ ಕಮ್ಮೀನೇ !! ಟ್ರಾಫಿಕ್ ಪೋಲೀಸ್ ಹಿಡಿದ ತಕ್ಷಣ ಎಲ್ಲ ಮಾಡೋ ಕೆಲ್ಸಾನಾ ನಾನು ಮಾಡ್ಬಿಟ್ಟೆ ಇವತ್ತು. ಅದೇನು ಅಂತ ಕೇಳ್ತೀರಾ ?? ಹ ಹ ಹ !!! ಅದೆರೀ... ಮೊಬೈಲ್ ತಗೊಂಡು ಆವ್ರಿವ್ರಗೆ ಕಾಲ್ ಮಾಡೋದು. ಅದೇನು ಸ್ಟೈಲ್ ಅಂತೀರಾ . ಅಬ್ಬಬ್ಬಬ್ಬಾ ,,,,,
ಸುಮ್ನೆ ನನ್ ಅಕ್ಕಾನು ಟ್ರಾಫಿಕ್ ಪೋಲೀಸ್ ನನಗೂ ಚೂರುಪಾರು LAW ಗೊತ್ತು ಅಂದೆ,
ಯಾವ ಸ್ಟೇಶನ್ ಅಂತ ಕೇಳ್ದ.
ಅಲ್ಸೂರು ಪೋಲೀಸ್ ಸ್ಟೇಶನ್ ಅಂದೆ
ಹೌದಾ.... ಅಂದ
ಹೌದು ಸ್ವಾಮಿ. ಫೈನ್ ಕಟ್ಟೋಕೇನು ಪ್ರಾಬ್ಲಮ್ ಇಲ್ಲ, ಆದ್ರೆ ರಸೀದಿ ತಂದು ಕೊಟ್ಟು ನನ್ ಲೈಸೆನ್ಸ್ ನಾ ತಗೊಂಡು ಹೋಗೋಕೆ ಜಯನಗರ ದಿಂದ ಬರ್ಬೇಕಲ್ಲ ಅಂತಾ ಯೋಚನೆ ಅಂದೆ.
ಅಯ್ಯಯ್ಯೋ ಪಾಪ ಅನ್ನೊತರ ಮುಖ ನೋಡಿದ.
ನನ್ ಅಕ್ಕ ಹೇಳ್ತ ಇದ್ರು. ಮೊದಲನೇ ಸಲ ಅಂತಾದ್ರೆ ಕ್ಷಮೆ ಇದೆ ಅಂತ ಅಂದೆ. ತಾಳಿ ಮತ್ತೊಂದ್ಸಲ ಕಾಲ್ ಮಾಡಿ ಮಾತಾಡ್ತೀನಿ. ಏನ್ರೀ ನಿಮ್ ಹೆಸ್ರು. ಯಾವ ಪೋಲೀಸ್ ಸ್ಟೇಶನ್ ಅಂದೆ..
ತಗಳ್ಳ್ರಿ....!!!
ಮುಖ ಕೆಳ್ಗೆ ಹಾಕ್ಕಂಡು ನನ್ ಲೈಸೆನ್ಸ್ ವಾಪಸ್ ಕೊಟ್ಟು ಪುಗ್ಸಟ್ಟೆ ಸಜೆಸನ್ ಕೊಟ್ಬೂಟ್ಟು ಹೊರಟೇ ಹೊಗ್ಬುಟ್ಟ.
ಇರ್ಲಿ, ವಿಶ್ಯಕ್ ಬರಣ.
ಲ್ಯಾಪ್ಟಾಪ್ ಬ್ಯಾಗ್ ನಾ ಹೆಗ್ಲಿಗ್ ಹಾಕ್ಕಂಡು, ಕ್ಯಾಮರ ಬ್ಯಾಗ್ ನೂ ನೇತು ಹಾಕ್ಕಂಡು ಮೆಜೆಸ್ಟಿಕ್ಕ್ ಅಂಡರ್ ಪಾಸ್ ನ ಒಳಗೆ ನಡ್ಕಂಡು ಹೋಗ್ತಾ ಇದ್ದೇ.
ಸಡನ್ ಆಗಿ
" ಬರ್ತೀರಾ? ಹಲೋ.. ನಿಮ್ಮನ್ನೇ ಕೆಳಿದ್ದು. ಒಂದು ಸಾವಿರ ಕೊಡಿ ಅಸ್ಟೇ." ಅಂತ ಒಂದು ಹೆಣ್ಣು ಮಗಳ ಧ್ವನಿ ಕಿವಿಗೆ ಬಿತ್ತು.ತಿರುಗಿ ನೋಡಿದ್ರೆ ಯಾರೋ ಒಬ್ಬ ಗಿರಾಕಿ ಜೊತೆ ನೋಡಲು ಅಸ್ಟೇನು ಚೆಂದವಲ್ಲದ ಹುಡುಗಿಯೊಬ್ಬಳು ತನ್ನನ್ನ ಒಂದು ಘಂಟೆಗೊ ಅರ್ಧ ದಿನಕ್ಕೊ ಮಾರಿಕೊಳ್ಳೋಕೆ ಹೊರಟಿದ್ಲು ಅನ್ನೋದು ಖಾತ್ರಿ ಆಯ್ತು. ಮಾಸಲು ಬಣ್ಣದ ಶರ್ಟ್ , ಇಸ್ತ್ರಿ ಕಂಡು ವರ್ಷಗಳಾದ ಪ್ಯಾಂಟ್ . ಅವಿದ್ಯಾವಂತ ಅಂತಾನೆ ಅಂದ್ಕೋಳೊ ಹಾಂಗೆ ಇದ್ದ ಕಾಮುಕ ಕೂಡ ಕಣ್ಣಿಗೆ ಬಿದ್ದ. " ಶುಭ ಮುಂಜಾವಿನ ತೆವಲನ್ನ ತೀರ್ಸ್ಕೊಳೊಕೆ ಹೊರಟಿದ್ದ ಬೇಟೆಗಾರ" ಅನ್ನಿಸ್ತು ಅವನನ್ನ ಕಂಡು. ಅಯ್ಯೋ ಬೆಳಗ್ಗೆ ಬೆಳಗ್ಗೆ ಏನಪ್ಪಾ ಇದು ಅಂದ್ಕೊಂಡು ಮತ್ತೆ ತಿರುಗಿ ನೋಡದೆ ಹೊರಟುಬಿಟ್ಟೆ ಅಲ್ಲಿಂದ.
ಮೆಜೆಸ್ಟಿಕ್ಕ್ ನಾ ಮೂರು ಸುತ್ತು ಹಾಕಿದ್ಮೇಲೆ ಗೌರಿಬಿದನುರಿಗೆ ಹೋಗೋ ಬಸ್ ಸಿಕ್ತು ನೋಡಿ. ಹೊರ್ಡೊಕೆ ಇನ್ನ ಹತ್ತು ನಿಮಿಷ ಆಗ್ತದೆ ಸರ್ ಅಂದ ಡ್ರೈವರೂ, ತಿಂಡಿ ತಿಂದು ಬಿಡೋಣ ಅಂತ ಹೋಟೆಲ್ ಹುಡ್ಕೊಕೆ ಶುರು ಮಾಡ್ ದೆ , ಇವಾಗಂತೂ ಭಯಂಕರ ನಮ್ ಮೆಜೆಸ್ಟಿಕ್ಕು ಬಸ್ ನಿಲ್ದಾಣ. ಸುತ್ತಲೂ ನಮ್ಮ(ನಾಮ) ಮೆಟ್ರೊ ದ ಬೋರ್ಡಿರೋ ತಡೆಗೋಡೆಗಳು , ಎಲ್ಲೆಲ್ಲೂ ಮೂತ್ರದ ವಾಸನೆ, " ಇಲ್ಲಿ ಮೂತ್ರ ಮಾಡಿದವರಿಗೆ 500 ರೂ ದಂಡ ಹಾಕಲಾಗುವದು ಎಂದು ಕಪ್ಪು ಅಕ್ಷರದಲ್ಲಿ ಬರೆದ ನಾಮ ಫಲಕಗಳು, ಇಲ್ಲಿ ಸೀ ಸೀ ಟೀವಿ ಅಳವಡಿಸಲಾಗಿದೆ, ಗಲೀಜು ಮಾಡಿದರೆ ಕ್ರಮ ಕೈಗೊಳ್ಳಲಾಗುವದು ಎಂಬಂಥ ಬೋರ್ಡುಗಳ ಪಕ್ಕದಲ್ಲೇ ನಿಂತು ಶಿಳ್ಳೆ ಹೊಡೆಯುತ್ತಾ ಆನಂದವಾಗಿ ಗಲೀಜು ಮಾಡುವಂತಹ ಮುಂಡೆ ಮಕ್ಳು, ಅಣ್ಣಾ ಅಮ್ಮಾ ಅಕ್ಕಾ ಚಿಲ್ರೆ ಪ್ಲೀಸ್ ಅನ್ನೋ ಭಿಕ್ಷುಕರು, ಲೆಯ್ ... ನಡಿಯೇ ಬೀರ್ ಬೀರ್ ನೇ ಬಸ್ ಹೋನ್ಟೊಗ್ಬುಡ್ತದೆ ಅಂತ ಹೆಂಡತಿಗೆ ಬೈದು ಜುಟ್ಟು ಕಟ್ಟಿರದ ಮಗಳನ್ನ ದರ ದರನೆ ಎಳೆದುಕೊಂಡೋಗ್ತಿರೋ ಮಹಾನುಭಾವನ ಬಾಯಲ್ಲಿದ್ದ ಮೋಟು ಬೀಡಿಯ ಹೊಗೆ, ಸರ್ ಎಲ್ಗೆ ಸರ್ ಅಂತ ವಿನಯ ಪೂರ್ವಕ ವಾಗಿ ಕರೆಯೋ ನಮ್ ಆಟೋ ರಾಜಂದಿರು, ಉಸ್ಸಪ್ಪ...... ಇವುಗಳನ್ನೆಲ್ಲ ನೋಡಿ ದಂಗು ಬಡಿದೊದ ನಮ್ ನಿಖಿಲಪ್ಪ. (ಹಂಗಂದ್ರೆ ನಾನೇ).ಅನ್ನಪೂರ್ಣೇಶ್ವರಿ ಹೋಟೆಲ್ ನಲ್ಲಿ ಇಡ್ಲಿ ವಡೆ ತಿಂದೆ ನೋಡಿ ನಮ್ಮೂರಿನ ಗಣೇಶಣ್ಣನ ಹೋಟೆಲ್ ನಲ್ಲಿ ತಿಂತಿದ್ದ ಇಡ್ಲಿ ಬನ್ಸು ಸಾಂಬಾರು ನೆನಪಾಗ್ಬಿಡ್ತು. ನೆನಪನ್ನ ಒರೆಸಿಕೊಂಡು ಅರ್ಧಂಬರ್ಧ ತಿಂದು ಬಸ್ ಹತ್ತಿ ಕೂತೆ. ಒಳ್ಳೆ ನಿದ್ರೆ.... ಯಲಹಂಕ ಯಲಹಂಕ ಅನ್ನೋವಾಗ ಎಚ್ಚರ ವಾಗಿದ್ದು ಬಿಟ್ರೆ ಆಮೇಲೆ ಗೌರಿಬಿದನೂರು ತಲುಪಿ ನಮ್ಮ ಕನ್ನಡದ ಕಂಡಾಕ್ಟ್ರು ಎದ್ದೇಳ್ರಿ ಬಂತು ನೀವು ಇಳಿಯೋ ಜಾಗ ಅಂದಾಗ್ಲೇ ಕಣ್ಣು ಮಿಟುಕಿಸಿ ಎದ್ದಿದ್ದು ನಾನು.
ಹೊಸ ಜಾಗ ಹೊಸಾ ಜನ ಎಲ್ರೂ ನನ್ನನ್ನ ತಿಂದು ಹಾಕೊ ಹಾಂಗೆ ನೋಡ್ತಾ ಇದ್ರಪ್ಪ. ಬಹುಶಹ ನಾವು ಹಾಕ್ಕೊಂಡಿರೋ ಶೂ , ನೀಲಿ ಬಣ್ಣದ ಜೀನ್ಸ್, ಬಿಳಿ ಬಣ್ಣದ ಹೊಸ ಶರ್ಟ್ ಇವೆಲ್ಲವೂ ಕಣ್ಣು ಕುಕ್ಕಿರ್ಬೇಕು ಇರ್ಲಿ ಕುಕ್ಕದ್ರೆ ಕುಕ್ಕಳ್ಳಿ, ನಾವಂತೂ ತುಂಬಾ ಒಳ್ಳೇವ್ರು. ಕ್ಲೈಂಟ್ ಪ್ಲೇಸ್ ಗೆ ಹೋಗಿ ನೀಟಾಗಿ ಎಲ್ಲಾ ಕೆಲ್ಸ ಮುಗ್ಸಿ ಹೊರಡುವಾಗ 4 ಘಂಟೆ.
ಮುಸ್ಸಂಜೆ ಹೊತ್ತು , ಯಾವತ್ತೂ ಬರದಿದ್ದ ನಿದ್ರೆ ಇವತ್ತು ಜೋರು. ಬಸ್ ಹತ್ತಿ ಮಲಕ್ಕೊಂಡೆ. ಎದ್ದಾಗ ಕಂಡಿದ್ದು ಮತ್ತೆ ಅದೇ ಕೊಳಕು ಮೆಜೆಸ್ಟಿಕ್ಕ್.ಸಾಕಪ್ಪ ಸಾಕು- ಮನೆಗೆ ಹೋಗಿ ಸ್ನಾನ ಮಾಡೊಣ ಅಂತ ನಿರ್ಧರಿಸಿ ರೈಲ್ವೆ ಸ್ಟೇಶನ್ ಬಳಿ ನಿಲ್ಲಿಸಿದ್ದ ನನ್ನ ಉದ್ದನೆಯ ಬೈಕ್ ಹತ್ತಿರ ಹೊರಟೆ. ಬ್ಯಾಗು ತುಂಬಾ ಭಾರ ಇದ್ದದ್ದ್ರಿಂದ ಸ್ವಲ್ಪ ಅಂಡು ಉರಿಕೊಂಡು ಕೂತ್ಕೊಳೊಣ ಅಂತ ಕೂತೆ ನೋಡಿ---- ಅದ್ಯಾವ್ದೋ ಹೆಣ್ಣು ಮಗಳು ಅಳೋ ಸದ್ದು ಕಿವಿಗೆ ಬಿತ್ತು.ಪಾರ್ಕ್ ಮಾಡಿದ್ದ ಕಾರಿನ ಪಕ್ಕ ಇಣುಕಿ ನೋಡ್ಬಿಟ್ಟೆ. ಉಸ್ಸಪ್ಪ.. ಮತ್ತದೇ ಹುಡುಗಿಯ ದರ್ಶನ.ಬಾಯಲ್ಲಿ ಇದ್ದ ತಂಬಾಕು ಉಗಿದು ಗೋಳೋ ಅಂತ ಒಂದೇ ಸಮನೆ ಅಳುತ್ತಾ ಇದ್ದಳು. ಹಾಕಿದ್ದ ಬಟ್ಟೆ ಬದಲಾಗಿತ್ತು. ಬಹುಶಹ ಕಾಮುಕನಿಗೆ ಸುಖವುಣ್ಣಿಸಿರಬೇಕು.ಏನು ಜನ್ಮ ತಂದೆ ಅಂತ ದೇವ್ರ್ನ ಬೈದು ಅವ್ರ ಮಾತ್ನ ಕೆಳಿಸ್ಕಳಣ ಅಂತ ಸುಮ್ನಾದೆ." ಪ್ರೀತಿ ಮಾಡಿ ಮೋಸ ಹೋದೆ ಕಣೆ. ಯಾರ ಹತ್ರ ಹೇಳಿಕೊಳ್ಳಲಿ ನನ್ನ ನೋವನ್ನ. ನನ್ನ ರಾಜಕುಮಾರಿ ತರಹ ನೋಡಿಕೊಳ್ತಾನೆ ಅಂತ ಇರೋದ್ನೆಲ್ಲ ಬಿಟ್ಟು ಈ ಹಾಳಾದ್ ಊರಿಗೆ ಬಂದೆ. ಆ ಬೋಳಿಮಗನ ಮದ್ವೆನೂ ಮಾಡ್ಕಂಡೆ. ಕೈಗೆ ಕಿತ್ತೋಗಿರೊ ಚಪ್ಪಲಿ ಕೊಟ್ಬಿಟ್ಟ ಪಾಪಿ. ಬದುಕು- ಏನು ಮಾಡೋದು. ಹೊಟ್ಟೆಪಾಡು ಮೈ ಮಾರ್ಕೋತಿನಿ. ಬರೋ ಕಾಸು ಈ ಪೋಲೀಸ್ ಗೆ ಕೊಡೋಕೆ ಸಾಕಾಗಲ್ಲ, ಕುಡುಕ ಗಂಡನ್ನ ಸಾಕಲೋ- ಜೀವನ ನಡೆಸಲೋ- ಅಥವಾ ಎಲ್ಲ ಬಿಟ್ಟು ಮತ್ತೆ ವಾಪಸ್ ಊರಿಗೆ ಹೊರಟು ಹೋಗಲೋ ಒಂದು ತೋಚ್ತ ಇಲ್ಲ. ಅವನು ಕುಡುಕಾನೆ ಇರಬಹುದು ಆದ್ರೂ ನಾ ಪ್ರೀತಿಸಿದ ಜೀವ ಅದು. ಅವನನ್ನ ಬಿಟ್ಟಿರೋಕಾಗಲ್ಲ, ಸತ್ತೇ ಹೋಗಿಬಿಡ್ತಿನಿ ನಾನು ಕಣೆ"
ಉಪ್ಸ್.... ಒಂಥರಾ ನಮ್ ಕನ್ನಡ ಸಿನೆಮಾ ನೋಡಿದಾಂಗೆ ಆಯ್ತು ತಕ್ಕಮಟ್ಟಿಗೆ. ಎಂತೆಂಥ ಕಥೆಗಳಪ್ಪ ದೇವ್ರೇ. ನಿನ್ನ ಲೀಲೇನೆ ಲೀಲೆ ಅಂತ ಕೈ ಮುಗಿದು ಮತ್ತೆ ಅಲ್ಲಿಂದ ಹೊರಟೆ. ಎಂದಿನಂತೆ ಸಣ್ನನೆ ಮಳೆ ಶುರುವಾಗಿತ್ತು. ಮನಸು ಭಾರವಾಗಿತ್ತು. ಬೇಡ ಬೇಡ ಅಂದ್ರುನೂ ಆ ಪಾಪದ ಹೆಣ್ಣು ಮಗಳ ಜೀವನ ಚಿತ್ರ ನೆನಪಾಗ್ತಾ ಇತ್ತು.
ಕಣ್ಣೆದುರು ಕಾಣಿಸ್ತಾ ಇದ್ದದ್ದು ನಮ್ಮ KSRTC ಬಸ್ ನಲ್ಲಿ ಬರೆದಿದ್ದ "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ" ಎಂಬ ಸಾಲುಗಳು.ಮನಸು ಗುನುಗುತ್ತಾ ಇದ್ದದ್ದು ಮಾತ್ರ " ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ" ಎಂಬ ಭಾವನಾತ್ಮಕ ನೆನಪುಗಳು.
ನಿಖಿಲ್- 26-07-2013